ಜನರ ವಿಶ್ವಾಸಕ್ಕೆ ಪಾತ್ರವಾದ ಸಂಸ್ಥೆ ದಾವಣಗೆರೆ ಜಿಲ್ಲಾ ವರದಿಗಾರರ ಕೂಟ -ಮಧ್ಯ ಕರ್ನಾಟಕ ದಾವಣಗೆರೆ ಜಿಲ್ಲಾ ವರದಿಗಾರರ ಕೂಟ ಸ್ಥಾಪನೆಗೆ 2007ರಲ್ಲಿ ನಡೆದ ಘಟನೆಯೊಂದು ಅಡಿಗಲ್ಲು ಆಗಿದ್ದು ಇತಿಹಾಸ. ವಿದ್ಯಾ ನಗರಿ, ಶೈಕ್ಷಣಿಕ ನಗರಿ, ವಾಣಿಜ್ಯ ನಗರಿ, ದಾನಿಗಳ ನಗರಿ ಹೀಗೆ ನಾನಾ ಹೆಸರು, ಬಿರುದುಗಳಿಂದ ಬಣ್ಣಿಸಲ್ಪಡುವ ದಾವಣಗೆರೆಯಲ್ಲಿ ಪತ್ರಕರ್ತರು ತಮ್ಮ ಸ್ವಾಭಿಮಾನಕ್ಕಾಗಿ ಹುಟ್ಟು ಹಾಕಿದ ದಾವಣಗೆರೆ ಜಿಲ್ಲಾ ವರದಿಗಾರರ ಕೂಟ ಇಂದು ಪತ್ರಕರ್ತರಿಗೆ ನೈತಿಕ ಶಕ್ತಿಯಾಗಿ, ಭರವಸೆಯ ಗೋಡೆಯಾಗಿ ಬೆಳೆದು ನಿಂತಿದೆ
ವರದಿಗಾರರ ಕೂಟಕ್ಕೆ ಈಗ 17ರ ಹರೆಯ! ಈಗ್ಗೆ 17 ವರ್ಷದ ಹಿಂದೆ ಸ್ಥಾಪನೆಯಾದ ದಾವಣಗೆರೆ ಜಿಲ್ಲಾ ವರದಿಗಾರರ ಕೂಟ ಆರಂಭಕ್ಕೆ ಒಂದು ಕಹಿ ಅನುಭವ ಕಾರಣವಾಗಿದ್ದಾದರೂ, ಅದನ್ನು ನಕಾರಾತ್ಮಕವಾಗಿ ಸ್ವೀಕರಿಸದೇ ಸಕಾರಾತ್ಮಕವಾಗಿ ಪರಿಗಣಿಸಿದ ಪರಿಣಾಮ ಇಂದು ವರದಿಗಾರರ ಕೂಟ ಹರೆಯದ ವಯಸ್ಸಿನ ಸದೃಢ ಯುವಕನಂತೆ ಬಲಿಷ್ಟವಾಗಿ ಬೆಳೆದು ನಿಂತಿದೆ. ದಾವಣಗೆರೆ ಜಿಲ್ಲಾ ವರದಿಗಾರರ ಕೂಟ ಸ್ಥಾಪನೆಯ ಹಿಂದೆ ಸಾಕಷ್ಟು ಜನರ ಪರಿಶ್ರಮ ಇದೆ. ನಮ್ಮದೇ ಆದ, ಪತ್ರಕರ್ತರ ಸ್ವಾಭಿಮಾನ ಎತ್ತಿ ಹಿಡಿಯುವಂತಹ ಸಂಸ್ಥೆ ಕಟ್ಟಬೇಕೆಂಬ ಅಂದಿನ ಯುವ ಪತ್ರಕರ್ತರ ಕನಸಿ ಗೆ ಹಿರಿಯ ಪತ್ರಕರ್ತರು ಆಸರೆಯಾಗಿ ನಿಂತರು. ಆರಂಭದಲ್ಲಿ ಕೆಲ ಹಿರಿಯರು ನಮ್ಮಿಂದಲೇ ಆಗಿಲ್ಲ, ನಿಮ್ಮಿಂದಲೂ ಅಸಾಧ್ಯವೆಂಬ ಮಾತುಗಳನ್ನೂ ಸಹ ಆಡಿದ್ದುಂಟು. ಆದರೆ, ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ದಾವಣಗೆರೆಯಲ್ಲಿ ಯುವ ಪತ್ರಕರ್ತರು ನಮ್ಮದೇ ಒಂದು ಸಂಸ್ಥೆ ಕಟ್ಟುವ ಸಂಕಲ್ಪ ಮಾಡಿಯಾಗಿತ್ತು.
-ಪತ್ರಕರ್ತರ ಸ್ವಾಭಿಮಾನದ ಜಿದ್ದು ಕೂಟ! ಆರಂಭದಲ್ಲಿ ದಾವಣಗೆರೆಯ ಕನ್ನಡಪ್ರಭ ಕಚೇರಿ, ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರ, ಶ್ರೀ ಶಿವಯೋಗಿ ಮಂದಿರ ಹೀಗೆ ಅಲ್ಲಲ್ಲಿ ಕೇವಲ ಬೆರಳೆಣಿಕೆಯ ಯುವ ಪತ್ರಕರ್ತರು, ಒಂದಿಬ್ಬರು ಹಿರಿಯರು ಸೇರಿ ಶುರು ಮಾಡಿದ ಚರ್ಚೆ ಕಡೆಗೆ ವರದಿಗಾರರ ಕೂಟಕ್ಕೆ ಒಂದು ಅಂತಿಮ ರೂಪು ರೇಷೆ ಸಿದ್ಧಗೊಳ್ಳಲು ವೇದಿಕೆಯಾಯಿತು. ಕನ್ನಡಪ್ರಭ, ಪ್ರಜಾವಾಣಿ, ವಿಜಯ ಕರ್ನಾಟಕ, ಜನತಾವಾಣಿ, ನಗರವಾಣಿ, ಸಂಯುಕ್ತ ಕರ್ನಾಟಕ ಹೀಗೆ ವಿವಿಧ ರಾಜ್ಯಮಟ್ಟದ, ಸ್ಥಳೀಯ ಪತ್ರಿಕೆಗಳು, ದೂರದರ್ಶನ, ಉದಯ ನ್ಯೂಸ್, ಸುವರ್ಣ ನ್ಯೂಸ್, ಟಿವಿ 9 ಸುದ್ದಿ ವಾಹಿನಿಗಳ ಪ್ರತಿನಿಧಿಗಳು ಸೇರಿ, ಕೈಜೋಡಿಸಿ ಕಟ್ಟಿದ ವರದಿಗಾರರ ಕೂಟ ಇಂದು ಹೆಮ್ಮರವಾಗಿದೆ.
ಹಿರಿಯ ಪತ್ರಕರ್ತರನ್ನು ಮುಂದಿಟ್ಟುಕೊಂಡು, ಜವಾಬ್ಧಾರಿಗಳನ್ನು ಹಿರಿಯರ ಹೆಗಲಿಗೇರಿಸಿ, ಕಿರಿಯ ಪತ್ರಕರ್ತರು ವರದಿಗಾರರ ಕೂಟ ಸ್ಥಾಪನೆ ಶ್ರಮಿಸಿದ ಪರಿಣಾಮ ಇಂದು 164 ಸದಸ್ಯರ ಶಕ್ತಿಯಾಗಿ ವರದಿಗಾರರ ಕೂಟ ಬೆಳೆದು ನಿಂತಿದೆ. ದಾವಣಗೆರೆ ಕೆಬಿ ಬಡಾವಣೆಯ 1ನೇ ಮುಖ್ಯರಸ್ತೆಯ ನಂ.1156ರಲ್ಲಿ ಬಾಡಿಗೆ ಕಟ್ಟದಲ್ಲಿ ದಾನಿಗಳು, ಜನ ಪ್ರತಿನಿಧಿಗಳ ಸಹಕಾರದಲ್ಲಿ ಕೂಟ ಆರಂಭವಾಯಿತು. 12.9.2007ರಂದು ಕೂಟದ ಮೊದಲ ಕಾರ್ಯಕಾರಿ ಸಭೆ ನಡೆಸಲಾಯಿತು.14.9.2007ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಶ್ರೀ ಗಣೇಶ, ಶ್ರೀ ಲಕ್ಷ್ಮಿ, ಶ್ರೀ ಸರಸ್ವತಿ ಪೂಜೆಯೊಂದಿಗೆ ಆರಂಭವಾದ ವರದಿಗಾರರ ಕೂಟ ಈವರೆಗೆ ಹಲವಾರು ಅಧ್ಯಕ್ಷರನ್ನು ಕಂಡಿದೆ.
14.9.2007ರಿಂದ ಕೂಟವು ಕಾರ್ಯಾರಂಭ ಅಂದಿನಿಂದ ಇಂದಿನವರೆಗೂ ಅದೇ ಬಾಡಿಗೆ ಕಟ್ಟಡದಲ್ಲಿ ವರದಿಗಾರರ ಕೂಟವು ಸಹ ಸಾಗುತ್ತಿದೆ. ಆಯಾ ಕಾಲದಲ್ಲಿ ಆಗಿನ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಖಜಾಂಚಿ, ಕಾರ್ಯಕಾರಿ ಸಮಿತಿ ಸದಸ್ಯರು ಕೂಟದ ಹಿತದ ಜೊತೆಗೆ ಕೂಟದ ಸರ್ವದ ಸದಸ್ಯರ ಹಿತ ಕಾಯುವ ಕೆಲಸ ಮಾಡಿಕೊಂಡೇ ಬರುತ್ತಿದೆ. 14.9.2007ರಿಂದ ಆರಂಭವಾದ ವರದಿಗಾರರ ಕೂಟವು ಸ್ಥಾಪನೆಯಾದ ಎರಡನೇ ದಿನವೇ ಅಂದರೆ 16.7.2007ರಂದು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷರ ಸಂವಾದ ನಡೆಸಲು ತೀರ್ಮಾನಿಸಿತ್ತು. ಹೊಟೆಲ್, ಪ್ರವಾಸಿ ಮಂದಿರ, ಖಾಸಗಿ ಕಟ್ಟಡ, ಮನೆ, ಮಠ, ಮಂದಿರಗಳಲ್ಲಿ ಪತ್ರಿಕಾಗೋಷ್ಟಿ ನಡೆಯುತ್ತಿದ್ದುದಕ್ಕೆ ಬಹುತೇಕ ಅಂತ್ಯ ಹಾಡಲಾಯಿತು. ಆಗೆಲ್ಲಾ ಒಂದು ಸುದ್ದಿಗೋಷ್ಟಿಯನ್ನು ಹೊಟೆಲ್ನಲ್ಲಿ ಕರೆದರೆಂದರೆ ಆವತ್ತಿನ ಕಾಲಕ್ಕೆ ಸುದ್ದಿಗೋಷ್ಟಿ ಕರೆದವರಿಗೆ ಆರ್ಥಿಕ ಹೊರೆಯಾಗುವಸ್ಥಿತಿ ಇತ್ತು.
ಪತ್ರಿಕಾಗೋಷ್ಟಿ ಮಾಡುವವರಿಗೂ ಹೊರೆ ಆಗದಂತೆ, ವರದಿಗಾರರ ಕೂಟವೂ ಬೆಳೆಯಲು ಅನುಕೂಲವಾಗುವಂತೆ ದೂರದೃಷ್ಟಿಯಿಂದ ಕಟ್ಟಿದ ವರದಿಗಾರರ ಕೂಟ ಇಂದು ನೊಂದವರು, ಅಸಹಾಯಕರು, ಅವಕಾಶ ವಂಚಿತರು, ಅನ್ಯಾಯಕ್ಕೊಳಗಾದವರು, ಸೌಲಭ್ಯ ವಂಚಿತರ ಧ್ವನಿಯಾಗಿದೆ. ಸಾಧಕರ ಸಾಧನೆಗೆ ಮೆಟ್ಟಿಲಾಗಿದೆ. ಸ್ಥಾಪನೆಯಾದ ದಿನದಿಂದ ಈವರೆಗೆ ಸಾವಿರಾರು ಪತ್ರಿಕಾಗೋಷ್ಟಿಗಳು, ಹತ್ತು ಹಲವಾರು ಸಂವಾದ ಗಳು, ಸಂಕಷ್ಟದ ಪರಿಸ್ಥಿತಿಯಲ್ಲಿ ಪತ್ರಕರ್ತರ ಬೆನ್ನಿಗೆ ಬೆಂಗಾವಲಾಗಿ ನಿಲ್ಲುವ ಕೆಲಸ ವರದಿಗಾರರ ಕೂಟ ಮಾಡಿದೆ. ತೀರಾ ಈಚೆಗೆ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದ ಮಹಾಮಾರಿ ಕೋವಿಡ್-19 ಸಂದರ್ಭದಲ್ಲಿ ವರದಿಗಾರರ ಕೂಟ ಪತ್ರಕರ್ತರಷ್ಟೇ ಅಲ್ಲ, ಸಾರ್ವಜನಿಕರಿಗೂ ಉಚಿತ ಲಸಿಕೆ, ಆಹಾರ ಕಿಟ್ ಸಿಗಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣವಾಗಿತ್ತು.
ಸ್ಥಳೀಯ ಮಟ್ಟದಿಂದ ರಾಷ್ಟ್ರಮಟ್ಟದ ಮಾಧ್ಯಮ ಪ್ರತಿನಿಧಿಗಳು ಬಹುತೇಕ ರಾಜ್ಯ ಮಟ್ಟದ ಎಲ್ಲಾ ಪತ್ರಿಕೆಗಳೂ, ಎಲ್ಲಾ ಜಿಲ್ಲಾ ಮಟ್ಟದ ಪತ್ರಿಕೆಗಳು, ಪ್ರಾದೇಶಿಕ ಪತ್ರಿಕೆಗಳ ಸಂಪಾದಕರು, ಸಹ ಸಂಪಾದಕರು, ಸ್ಥಾನಿಕ ಸಂಪಾದಕರು, ಹಿರಿಯ ಪ್ರಧಾನ ವರದಿಗಾರರೂ, ವರದಿಗಾರರು , ಉಪ ಸಂಪಾದಕರಿಗೆ ಸದಸ್ಯತ್ವ ನೀಡುತ್ತಾ ಬರಲಾಗಿದೆ. 2008ರಿಂದ ವರದಿಗಾರರ ಕೂಟದ ಸದಸ್ಯತ್ವ ನೀಡುವ ಕಾರ್ಯಕ್ಕೆ ವೇಗ ದೊರಕಿತು. ಆರಂಭದಲ್ಲಿ ವರದಿಗಾರರ ಕೂಟದ ಸದಸ್ಯತ್ವ ಹೊಂದಲು ಮೀನಾ-ಮೇಷ ಎಣಿಸುತ್ತಿದ್ದವರು ಸ್ವಯಂ ಪ್ರೇರಣೆಯಿಂದ ಕೂಟದ ಸದಸ್ಯತ್ವ ಪಡೆಯುವಷ್ಟರ ಮಟ್ಟಿಗೆ ಪತ್ರಕರ್ತರು, ಸಂಘ-ಸಂಸ್ಥೆಗಳು, ಸಾರ್ವಜನಿಕರು, ಜನ ಪ್ರತಿನಿಧಿಗಳು, ಅಧಿಕಾರಿಗಳ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವ ಕೆಲಸವನ್ನು ವರದಿಗಾರರ ಕೂಟ ಮುಂದುವರಿಸಿಕೊಂಡೇ ಬರುತ್ತಿದೆ.